ಗ್ರಾಮದ ಒಗ್ಗಟ್ಟಿಗೆ ದೇವಾಲಯ ಮತ್ತು ಶಾಲೆ ಮುಖ್ಯ : ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಹರೀಶ್ ಅಭಿಮತ.

ಗುಬ್ಬಿ: ದೇವಾಲಯಗಳು ಹಾಗೂ ಶಾಲೆಗಳು ಯಾವ ಗ್ರಾಮದಲ್ಲಿ ಚೆನ್ನಾಗಿ ಇರುತ್ತೋ ಅ ಹಳ್ಳಿಯಲ್ಲಿ ಒಗ್ಗಟ್ಟು ಪ್ರದರ್ಶನವಾಗುತ್ತದೆ ಎಂದರ್ಥ ಎಂದು ತಾಲೂಕು ಯೋಜನಾಧಿಕಾರಿ ಹರೀಶ್ ತಿಳಿಸಿದರು.
ತಾಲೂಕಿನ ಜವರೇಗೌಡನಪಾಳ್ಯ ಗ್ರಾಮದ ಗ್ರಾಮ ದೇವತೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ 1.50 ಲಕ್ಷದ ಚೆಕ್ ವಿತರಣೆ ಮಾಡಿ ಮಾತನಾಡಿದ ಅವರು ಹಳ್ಳಿಗಳ ಅಭಿವೃದ್ದಿ ಹಾಗೂ ಒಗ್ಗಟ್ಟು ಹೇಗಿದೆ ಎಂಬುದನ್ನು ತಿಳಿಯಬೇಕಾದರೆ ಅ ಗ್ರಾಮದ ದೇವಾಲಯ ಮತ್ತು ಶಾಲೆ ಹೇಗಿದೆ ಅನ್ನುವುದನ್ನು ನೋಡಿದರೆ ತಿಳಿಯುತ್ತದೆ ಆದ್ದರಿಂದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಗ್ರಾಮೀಣ ಮಹಿಳೆಯರಿಗೆ ಸ್ವ ಉದ್ಯೋಗ ಸೃಷ್ಟಿಸುವ ಜೊತೆಗೆ ಗ್ರಾಮೀಣ ಬಾಗದ ಹಳ್ಳಿಗಳ ಅಭಿವೃದ್ಧಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ದಿ ,ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹಾಗೂ ದೇವಾಲಯಗಳ ಜೀರ್ಣೋದ್ಧಾರ ಮಾಡುವ ಮೂಲಕ ಗ್ರಾಮೀಣ ಜನರಿಗೆ ಬದುಕು ಕಟ್ಟಿಕೊಡುವ ಕೆಲಸಕ್ಕೆ ಮುಂದಾಗಿದೆ ಎಂದು ತಿಳಿಸಿದರು.
ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ವೆಂಕಟಸ್ವಾಮಯ್ಯ ಮಾತನಾಡಿ ನಮ್ಮ ದೇವಾಲಯದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಸಹಾಯ ಮಾಡುತ್ತಿರುವುದು ಬಹಳ ಸಂತೋಷವಾಗಿದೆ ಪ್ರತಿ ಹಳ್ಳಿಗಳಲ್ಲಿ ದೇವಾಲಯಗಳ ಅಭಿವೃದ್ಧಿಗೆ ಈ ಸಂಸ್ಥೆ ಸಹಕಾರಿಯಾಗಿದೆ ಇನ್ನು ಮುಂದಿನ ದಿನಗಳಲ್ಲಿ ಉನ್ನತಮಟ್ಟಕ್ಕೆ ಈ ಸಂಸ್ಥೆ ಬೆಳೆಯಲಿ ಎಂದರು. ನಮ್ಮ ಗ್ರಾಮದ ಜನರು ದೇವರ ಮೇಲೆ ನಂಬಿಕೆ ಇಟ್ಟು ಮುನ್ನಡೆಸಿಕೊಂಡು ಹೋಗುವ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಜೆ.ಎಂ.ನರಸಿಂಹಮೂರ್ತಿ, ಟ್ರಸ್ಟ್ ಕಾರ್ಯದರ್ಶಿ ನಾರಾಯಣಪ್ಪ , ಮುಖಂಡರಾದ ನರಸಿಂಹಮೂರ್ತಿ, ದೇವರಾಜು, ನಾಗರಾಜು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯರುಗಳಾದ ಗೀತಾ, ಮಂಜುಳಾ, ರೇಣುಕಮ್ಮ, ವಿಜಿಯಮ್ಮ, ಜಯಮ್ಮ, ಪುಟ್ಟಮ್ಮ, ಲಕ್ಷ್ಮಮ್ಮ ಇತರರು ಇದ್ದರು.
ವರದಿ:-ರಾಘವೇಂದ್ರ ಗುಬ್ಬಿ