ಗೊಲ್ಲಹಳ್ಳಿ ಮಹಾಸಂಸ್ಥಾನಕ್ಕೆ ನೂತನ ಶ್ರೀಗಳ ನಿರಂಜನ ನಿರಾಭಾರಿ ಪಟ್ಟಾಧಿಕಾರ ಮಹೋತ್ಸವ : ಇದೇ ತಿಂಗಳ 10 ಮತ್ತು 11 ಕ್ಕೆ ಕಾರ್ಯಕ್ರಮ

.
ಗುಬ್ಬಿ: ತಾಲ್ಲೂಕಿನ ಗೊಲ್ಲಹಳ್ಳಿ ಶ್ರೀ ಸಿದ್ದಲಿಂಗೇಶ್ವರ ಮಹಾಸಂಸ್ಥಾನದ ಎಲ್ಲಾ ಧಾರ್ಮಿಕ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ನೂತನ ಶ್ರೀಗಳ ಪಟ್ಟಾಧಿಕಾರ ವಹಿಸುವ ಕಾರ್ಯವನ್ನು ಇದೇ ತಿಂಗಳ 10 ಮತ್ತು 11 ರ ಎರಡು ದಿನ ವಿವಿಧ ಧಾರ್ಮಿಕಾಚರಣೆ ಮೂಲಕ ನಡೆಸಲು ಮಠದ ಸದ್ಭಕ್ತರು ಸಜ್ಜಾಗಿದ್ದಾರೆ ಎಂದು ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಟಿ.ಎಸ್.ಕಿಡಿಗಣ್ಣಪ್ಪ ತಿಳಿಸಿದರು.
ತಾಲ್ಲೂಕಿನ ಗೊಲ್ಲಹಳ್ಳಿ ಸಂಸ್ಥಾನದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಶ್ರೀ ಗೌರಿಶಂಕರ ಸ್ವಾಮೀಜಿಗಳ ನಂತರದಲ್ಲಿ ಈ ಸಂಸ್ಥಾನದ ಎಲ್ಲಾ ಕಾರ್ಯಭಾರ ನಿಭಾಯಿಸುವ ಶ್ರೀಗಳ ಆಯ್ಜೆ ನಡೆದಿದ್ದು, ಪಕ್ಕದ ಮದನಘಟ್ಟ ಗ್ರಾಮದ ನಾಗರಾಜ ದೇವರು ಅವರು ಬ್ರಹ್ಮೋಪದೇಶ ಪಡೆದು ಶ್ರೀ ವಿಭವ ವಿದ್ಯಾಶಂಕರ ದೇಶೀಕೇಂದ್ರ ಸ್ವಾಮೀಜಿಗಳಾಗಿ ನಾಮಾಂಕಿತಗೊಂಡು ನಿರಂಜನ ನಿರಾಭಾರಿ ಪಟ್ಟಾಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದರು.
ಇದೇ ತಿಂಗಳ 10 ರಂದು ತಮ್ಮಡಿಹಳ್ಳಿ ವಿರಕ್ತಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಉಪದೇಶದೊಂದಿಗೆ ಬ್ರಹ್ಮೋಪದೇಶ ಕಾರ್ಯ ನಡೆಸಿ ಸಂಜೆ ನಡೆಮುಡಿ ಕುಂಭೋತ್ಸವ ಕಾರ್ಯಕ್ರಮ ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ಮುನ್ನ ಬೆಳಿಗ್ಗೆ 8 ಕ್ಕೆ ಷಟ್ಸ್ಥಲ ಧ್ವಜಾರೋಹಣ ಸಮಾರಂಭ ಬೆಟ್ಟದಹಳ್ಳಿ ಗವಿಮಠಾಧ್ಯಕ್ಷ ಶ್ರೀ ಚಂದ್ರಶೇಖರ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಲಿದ್ದಾರೆ. ಖಾನಿ ಮಠದ ವಿದ್ವಾನ್ ಬಸವರಾಜು ಸ್ವಾಮೀಜಿ , ಹಾಲಸ್ವಾಮಿ ಮಠದ ಶ್ರೀ ಬಸವ ಜಯಚಂದ್ರ ಸ್ವಾಮೀಜಿ ಇತರರು ಉಪಸ್ಥಿತರಿರುತ್ತಾರೆ. 11 ನೇ ತಾರೀಕು ಬೆಳಿಗ್ಗೆ 11 ಕ್ಕೆ ನಡೆಯುವ ಧಾರ್ಮಿಕ ಸಮಾರಂಭದಲ್ಲಿ ಕೆರೆಗೋಡಿ ರಂಗಾಪುರ ಕ್ಷೇತ್ರದ ಶ್ರೀ ಗುರುಪರ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಹಲವು ಮಠಾಧೀಶರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಲಿದ್ದಾರೆ. ಸಂಸದ ಜಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸಲಿರುವ ಈ ವೇದಿಕೆಗೆ ಶಾಸಕರಾದ ಜ್ಯೋತಿಗಣೇಶ್, ಲಿಂಗೇಶ್ ಸೇರಿದಂತೆ ಅನೇಕ ರಾಜಕಾರಣಿಗಳು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ನೂತನ ಶ್ರೀಗಳಾಗಲಿರುವ ನಾಗರಾಜು ದೇವರು ಮಾತನಾಡಿ ಈ ಗೊಲ್ಲಹಳ್ಳಿ ಸಂಸ್ಥಾನದ ಎಲ್ಲಾ ಕಾರ್ಯಗಳನ್ನು ನೋಡಿಯೇ ಬೆಳೆದ ನಾನು ಪಕ್ಕದ ಮದನಘಟ್ಟ ಗ್ರಾಮದವನಾಗಿದ್ದು ವಿದ್ಯಾನಗರಿ ಕಾಶಿಯಲ್ಲಿನ ಸಂಪೂರ್ಣಾನಂದ ಸಂಸ್ಕೃತ ವಿವಿಯಲ್ಲಿ ಪ್ರಾಚೀನ ನ್ಯಾಯವೈಶೇಷಿಕಾಚಾರ್ಯ ಪದವಿಯಲ್ಲಿ ಸ್ವರ್ಣ ಪದಕ ಪಡೆದು ಈಗ ವಿದ್ಯಾವಾರಿಧಿ ಮಹಾ ಪ್ರಬಂಧ ಅಧ್ಯಯನ ನಡೆಸುತ್ತಿದ್ದು ಈ ಸಂಸ್ಥಾನ ನಡೆಸುವ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಎಲ್ಲಾ ಧಾರ್ಮಿಕ ಕೆಲಸದ ಜೊತೆ ಸಾಮಾಜಿಕ ಕಳಕಳಿ ವ್ಯಕ್ತಪಡಿಸಬೇಕಿದೆ. ಸಮಾಜದ ಹಿತ ಕಾಯುವ ಕೆಲಸ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಕೆಎಂಎಫ್ ನಿರ್ದೇಶಕ ಚಂದ್ರಶೇಖರ್, ಪತ್ರೆ ದಿನೇಶ್, ಎಸ್.ವಿಜಯಕುಮಾರ್, ಜಿ.ಎನ್.ಯತೀಶ್, ಬಿ.ಎಸ್.ಚಂದ್ರಮೌಳಿ, ಸಿದ್ದರಾಮಣ್ಣ, ಕಿಡಿಯಪ್ಪ ಇತರರು ಇದ್ದರು.
ವರದಿ:-ರಾಘವೇಂದ್ರ ಗುಬ್ಬಿ