ಬೆಂಗಳೂರು ಗ್ರಾಮಾಂತರ ಜಿಲ್ಲೆಸತ್ಯ ವಿಸ್ಮಯ ಪತ್ರಿಕೆ

ಭಾರತಾಂಬೆಯ ಮಕ್ಕಳು ನಾವು, ಒಟ್ಟಾಗಿ ಸದೃಢ ದೇಶ ಕಟ್ಟುವ: ಶಾಸಕ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್.

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 28(ಕರ್ನಾಟಕ ವಾರ್ತೆ): ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಜಾರಿಯಲ್ಲಿದೆ. ಭಾರತಾಂಬೆಯ ಮಕ್ಕಳಾದ ನಾವು, ಒಟ್ಟಾಗಿ ಸದೃಢ ದೇಶ ಕಟ್ಟುವ ಕೆಲಸ ಮಾಡೋಣ ಎಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್. ಅವರು ತಿಳಿಸಿದರು. ದೇವನಹಳ್ಳಿ ತಾಲ್ಲೂಕು ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ಪಟ್ಟಣದ ಡಾ|| ಬಿ.ಆರ್.ಅಂಬೇಡ್ಕರ್ ಭವನದಲ್ಲಿಂದು ಏರ್ಪಡಿಸಲಾಗಿದ್ದ “ಅಮೃತ ಭಾರತಿಗೆ ಕನ್ನಡದಾರತಿ” ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.

ಸ್ವಾತಂತ್ರ್ಯ ಪಡೆದು 75 ವರ್ಷಗಳು ಪೂರೈಸಿರುವ ಪ್ರತೀಕವಾಗಿ ಆಜಾದಿ ಕಾ ಅಮೃತ ಮಹೋತ್ಸವದ ಹೆಸರಿನಲ್ಲಿ ವರ್ಷವಿಡಿ ಸಂಭ್ರಮಾಚರಣೆ ಮಾಡುತ್ತಿದ್ದು, ಅದರ ಪ್ರಯುಕ್ತ ಇಂದು ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ‌ನಡೆಸುವ ಮೂಲಕ ಸ್ವಾತಂತ್ರ್ಯ ಹೋರಾಟ ನಡೆದು ಬಂದ ಹಾದಿಯನ್ನು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದ ಬ್ರಿಟಿಷರು, ಒಡೆದು ಆಳುವ ನೀತಿ ಅನುಸರಿಸುವ ಮೂಲಕ ದೇಶವನ್ನು ಕಬಳಿಸಿದರು. ಆ ಸಂದರ್ಭದಲ್ಲಿ ಹಲವಾರು ಜನರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ ಮಾತ್ರವಲ್ಲದೆ, ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದ ಮೂಲಕ ಸ್ವಾತಂತ್ರ್ಯ ಪಡೆದಿದ್ದೇವೆ ಎಂದರು. ಸ್ವಾತಂತ್ರ್ಯ ಪಡೆದು 75 ವರ್ಷಗಳು ಕಳೆದಿವೆಯಾದರೂ, ಪುಸ್ತಕದಲ್ಲಿರುವ ಇತಿಹಾಸವನ್ನು ಓದುವುದು ಮಾತ್ರವಲ್ಲದೆ, ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಜನರು ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳುವಲ್ಲಿ ಜಾಗೃತರಾಗಿರಬೇಕು ಎಂದರಲ್ಲದೆ, ವಿದ್ಯಾರ್ಥಿಗಳು ವ್ಯವಸ್ಥೆಯನ್ನು ಅವಲೋಕಿಸಿ, ಲೋಪದೋಷಗಳನ್ನು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯರಾದ ಜಗದೀಶ್ ಹಿರೇಮನಿ ಅವರು ಮಾತನಾಡಿ, ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಏಕಕಾಲದಲ್ಲಿ ರಾಜ್ಯದ 75 ಸ್ಥಳಗಳಲ್ಲಿ ಆಯೋಜಿಸಿ, ಸ್ವಾತಂತ್ರ್ಯದ ಕುರಿತು ಅರಿವು ಮೂಡಿಸುವುದಾಗಿದೆ ಎಂದರಲ್ಲದೆ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಂತಹ, ನಮ್ಮ ಜಿಲ್ಲೆಯ ಸುತ್ತಮುತ್ತಲಿನ ಪ್ರಾಂತ್ಯದವರನ್ನು ನಾವಿಂದು ಸ್ಮರಿಸುವ ಮೂಲಕ ನಮ್ಮ ಪ್ರಾಂತ್ಯ, ಜಿಲ್ಲೆ, ರಾಜ್ಯ ಹಾಗೂ ದೇಶದ ಕುರಿತು ಹೆಮ್ಮೆ ಪಡಬೇಕು ಎಂದರು. ಸ್ವಾತಂತ್ರ್ಯವೆಂಬುದು ಸುಲಭಕ್ಕೆ ಸಿಕ್ಕಿರುವಂತದ್ದಲ್ಲ. ಲಕ್ಷೋಪಲಕ್ಷ ಜನರ ತ್ಯಾಗ, ಬಲಿದಾನದ ಪ್ರತೀಕವಾಗಿ ನಾವಿಂದು ಸ್ವಾತಂತ್ರ್ಯವನ್ನು ಪಡೆದಿದ್ದೇವೆ ಎಂದರು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರ್ನಾಟಕದ ಕೊಡುಗೆ ಎಂಬ ಸಾಕ್ಷ್ಯಚಿತ್ರವನ್ನು ವೀಕ್ಷಿಸಲಾಯಿತು ಹಾಗೂ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ದೇವನಹಳ್ಳಿ ಪುರಸಭೆ ಅಧ್ಯಕ್ಷರಾದ ಡಿ.ಗೋಪಮ್ಮ, ಉಪಾಧ್ಯಕ್ಷರಾದ ಗೀತಾ ಶ್ರೀಧರ್‌ಮೂರ್ತಿ, ವಿಜಯಪುರ ಪುರಸಭೆ ಅಧ್ಯಕ್ಷರಾದ ರಾಜೇಶ್ವರಿ ಭಾಸ್ಕರ್, ಉಪಾಧ್ಯಕ್ಷರಾದ ಕೇಶವಪ್ಪ, ಕನ್ನಡ ಸಾಹಿತ್ಯ ಪರಿಷತ್‌ನ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ.ಬಿ.ಎನ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಮಂಜುನಾಥ್ ಆರಾಧ್ಯ, ದೇವನಹಳ್ಳಿ ತಹಶೀಲ್ದಾರ್ ಶಿವರಾಜು, ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವಸಂತಕುಮಾರ್ ಸೇರಿದಂತೆ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ದೇವನಹಳ್ಳಿ ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯದಿಂದ ಡಾ|| ಬಿ.ಆರ್.ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ಕಾರ್ಯಕ್ರಮ ನಡೆಯಿತು.

ವರದಿ:ಹರ್ಷ ಪಿ ಸತ್ಯ ವಿಸ್ಮಯ ಪತ್ರಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ

Related Articles

Leave a Reply

Your email address will not be published.

Back to top button

protected