ತುಮಕೂರುಸತ್ಯ ವಿಸ್ಮಯ ಪತ್ರಿಕೆ

ಉಳುಮೆಗೆ ಭೂಮಿ ಕೊಡದಿದ್ದರೂ ಶವ ಉಳಲು ಭೂಮಿ ನೀಡಿ : ದಲಿತರ ಕುಂದು ಕೊರತೆ ಸಭೆಯಲ್ಲಿ ಒಕ್ಕೊರಲಿನ ಮನವಿ.

ಗುಬ್ಬಿ: ಹಲವು ವರ್ಷದಿಂದ ಬೇಡಿಕೆ ಸಲ್ಲಿಸಿದ ದಲಿತರಿಗೆ ಸ್ಮಶಾನಕ್ಕೆ ಸೂಕ್ತ ಉತ್ತರ ನೀಡಲಿಲ್ಲ. ಉಳುಮೆಗೆ ಭೂಮಿ ಕೇಳಿ ಸಾಕಾಗಿದೆ. ಶವ ಸಂಸ್ಕಾರಕ್ಕಾದರೂ ಭೂಮಿ ನೀಡಿ ಎಂದು ದಲಿತ ಮುಖಂಡರು ಹತಾಶೆ ಹಾಗೂ ಆಕ್ರೋಶ ಭರಿತವಾಗಿ ಒಕ್ಕೊರಲಿನ ಮನವಿ ಮಾಡಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಸೀಲ್ದಾರ್ ಬಿ.ಆರತಿ ಅವರ ಅಧ್ಯಕ್ಷತೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ತಾಲ್ಲೂಕು ದಲಿತರ ಕುಂದು ಕೊರತೆ ಹಿತರಕ್ಷಣಾ ಸಮಿತಿಯ ಸಭೆಯಲ್ಲಿ ಮೊದಲಿಗೆ ಸ್ಮಶಾನ ವಿಚಾರವೇ ಸುದೀರ್ಘ ಚರ್ಚೆಯಾಯಿತು. ಸಾಕಷ್ಟು ಗ್ರಾಮದಲ್ಲಿ ದಲಿತರಿಗೆ ಸ್ಮಶಾನವಿಲ್ಲದೆ ಶವ ಸಂಸ್ಕಾರ ಮಾಡಲು ಪರದಾಡಿದ್ದಾರೆ. ಈ ಬಗ್ಗೆ ಹಲವು ಸಭೆಯಲ್ಲಿ ಚರ್ಚಿಸಿದ್ದೇವೆ. ಈ ಜೊತೆಗೆ ನಮಗೆ ಮಂಜೂರಾದ ಸ್ಮಶಾನ ಜಾಗ ಒತ್ತುವರಿಯಾದ ಘಟನೆ ಕೂಡಾ ಹೈರಾಣಾಗಿಸಿದೆ ಎಂದು ಕಿಡಿಕಾರಿದರು. ಎಂ.ಎಸ್.ಪಾಳ್ಯ ಗ್ರಾಮದಲ್ಲಿ ಸ್ಮಶಾನ ಒತ್ತುವರಿಗೆ ಅಧಿಕಾರಿಗಳೇ ಶಾಮೀಲಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮುಖಂಡ ಚೇಳೂರು ಶಿವನಂಜಪ್ಪ ಆಗ್ರಹಿಸಿದರು. ಕೇವಲ ಟೀ ಬಿಸ್ಕತ್ತು ನೀಡಿ ಸಭೆಯನ್ನು ಮುಗಿಸುವ ಕೆಲಸ ಮೊದಲು ನಿಲ್ಲಿಸಬೇಕು.

ದಲಿತರಿಗೆ ಆಗಿರುವ ಅನ್ಯಾಯ ಚರ್ಚೆಯಾಗಬೇಕು. ಸೂಕ್ತ ಉತ್ತರವನ್ನು ಅಧಿಕಾರಿಗಳು ನೀಡಬೇಕು. ಸರ್ಕಾರದ ಆದೇಶ ಪ್ರಕಾರ ಜಾತಿಗೆ ಸೀಮಿತ ಸ್ಮಶಾನ ಜಾಗವನ್ನು ನೀಡದೆ ಸಾರ್ವಜನಿಕ ಸ್ಮಶಾನ ಎಂದು ನಮೂದಿಸಿ ಎಲ್ಲಾ ಜಾತಿ ಜನಾಂಗಕ್ಕೂ ಅಲ್ಲಿ ಅನುವು ಮಾಡಲಾಗುವುದು. ಈ ಸಂದರ್ಭದಲ್ಲಿ ಯಾವುದೇ ಗೊಂದಲ ಮಾಡಿದರೆ ಪೊಲೀಸ್ ಬಂದೋಬಸ್ತ್ ನಲ್ಲಿ ಸಂಸ್ಕಾರಕ್ಕೆ ಅವಕಾಶ ಮಾಡಲಾಗುವುದು ಎಂದು ತಹಸೀಲ್ದಾರ್ ಬಿ.ಆರತಿ ತಿಳಿಸಿದರು.ಎಸ್ಸಿ ಎಸ್ಟಿಗೆ ಮೀಸಲಿಟ್ಟ ಹಣ ಮತ್ತೊಂದು ಕೆಲಸಕ್ಕೆ ಬಳಸಿದ ಆರೋಪ ಸಾಕಷ್ಟು ಮಾಡಿದ ಮುಖಂಡರು ನಲ್ಲೂರು ಗ್ರಾಪಂ ನಲ್ಲಿ ಈ ಕೃತ್ಯ ನಡೆದಿದೆ. ಗುಂಡಿಗೆ ಮಣ್ಣು, ಬೀದಿ ದೀಪ ಅಳವಡಿಕೆಗೆ ಬಳಸಿದ ಆರೋಪ ಹಲವು ಪಂಚಾಯಿತಿಯಲ್ಲಿ ಕೇಳಿ ಬಂದಿರುವ ಬಗ್ಗೆ ಚರ್ಚೆ ನಡೆಯಿತು. ಕೌಶಲ್ಯ ತರಬೇತಿಗೆ ಮೀಸಲಿಟ್ಟ ಹಣವನ್ನು ಮಕ್ಕಳಿಗೆ ನೀಡಿ ಶೈಕ್ಷಣಿಕ ಪ್ರಗತಿಗೆ ಸಹಕರಿಸಲು ದೇವರಾಜ್ ಮನವಿ ಮಾಡಿ, ಜಿ.ಹೊಸಹಳ್ಳಿ ಕ್ರಾಸ್ ಬಳಿ ಅಕ್ರಮವಾಗಿ ತಲೆ ಎತ್ತಿದ ಅಂಗಡಿಗಳು, ಕೋಳಿ ಅಂಗಡಿಗಳು ಅಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಕೋಳಿ ತ್ಯಾಜ್ಯ ರಸ್ತೆ ಬದಿ ಎಸೆದು ಸಾಕಷ್ಟು ಕಿರಿಕಿರಿ ಉಂಟುಮಾಡುವ ಬಗ್ಗೆ ಚರ್ಚೆ ನಡೆಸಿದರು.ಬ್ಯಾಂಕಿನಲ್ಲಿ ಸಾಲ ಸೌಲಭ್ಯದ ಅನುದಾನ ನೀಡುವಲ್ಲಿ ವಿಳಂಬ ಅನುಸರಿಸಿ ಸಲ್ಲದ ದಾಖಲೆ ಕೇಳಿ ಬಡ ದಲಿತ ಮಹಿಳೆಯರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಲೀಡ್ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಲು ಒತ್ತಾಯಿಸಿದ ಮುಖಂಡರು ದಲಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವಲ್ಲಿ ವಿಳಂಬ ಮಾಡದೇ ಸರ್ಕಾರದ ಸವಲತ್ತುಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಕೆಲಸ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾಡಬೇಕು ಎಂದು ಆಗ್ರಹಿಸಿ ಈಗಾಗಲೇ ಗುರುತಿಸಿದ ಸ್ಮಶಾನ ಜಾಗವನ್ನು ಕೇವಲ ದಾಖಲೆಗೆ ಸೀಮಿತ ಮಾಡದೆ ವಾಸ್ತವವಾಗಿ ಅಲ್ಲಿ ಸ್ಮಶಾನ ನಿರ್ಮಾಣ ಮಾಡಿಕೊಡಬೇಕು. ಸರ್ವೇ ಮಾಡಿಸಿ ಸ್ಥಳ ಗುರುತು ಮಾಡಲು ಒತ್ತಾಯಿಸಿದರು. ಈ ಸಭೆಯಲ್ಲಿ ತಾಪಂ ಇಓ ನರಸಿಂಹಯ್ಯ, ಸಮಾಜ ಕಲ್ಯಾಣಾಧಿಕಾರಿ ರಾಮಣ್ಣ, ಸಿಪಿಐ ನದಾಫ್, ಸಿಡಿಪಿಓ ಮಂಜುನಾಥ್, ಆರೋಗ್ಯಾಧಿಕಾರಿ ಡಾ.ಬಿಂದುಮಾಧವ್, ದಸಂಸ ಮುಖಂಡರಾದ ನಿಟ್ಟೂರು ರಂಗಸ್ವಾಮಿ, ಜಿ.ಸಿ.ನರಸಿಂಹಮೂರ್ತಿ, ಎನ್.ಎ. ನಾಗರಾಜ್, ಮಾರನಹಳ್ಳಿ ಶಿವಯ್ಯ, ಕೀರ್ತಿ ಇತರರು ಇದ್ದರು.

ವರದಿ: ರಾಘವೇಂದ್ರ ಗುಬ್ಬಿ

Related Articles

Leave a Reply

Your email address will not be published.

Back to top button
protected